ನಲ್ಲೂರಿನಿಂದ ಬೆಂಗಳೂರಿಗೆ....
ಕನ್ನಡ
ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಗುರುತಿಸಲ್ಪಟ್ಟ ಸಾಲಿನಲ್ಲಿ
ಡಾ.ನಲ್ಲೂರು ಪ್ರಸಾದ್ ಒಬ್ಬರು. ಕವಿ,
ಕಲಾವಿದ,
ಗಾಯಕ,
ಸಂಘಟಕ,
ಅಧ್ಯಾಪಕ,
ಜಾನಪದ
ಸಂಶೋಧಕರಾಗಿ ಕೆಲಸ ಮಾಡಿ ಈಗ ನಾಡಿನ ಸಾರ್ವಭೌಮ ಸಂಸ್ಥೆಯಾದ ಕೇಂದ್ರ ಕನ್ನಡ
ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾರೆ. ಗಾಂಧಿವಾದದಲ್ಲಿ ಅಚಲ ನಿಷ್ಠೆ
ಇರಿಸಿಕೊಂಡಿರುವ ಶ್ರೀಯುತರು ಬೆಳೆದುಬಂದಿದ್ದು ಗಾಂಧಿ ಅನುಯಾಯಿಗಳ
ಕುಟುಂಬದಲ್ಲಿ.
ಹಿನ್ನೆಲೆ: ಹಾಸನ ಜಿಲ್ಲೆ ಚನ್ನರಾಯಪಟ್ಟಣ
ತಾಲೂಕಿನ ನಲ್ಲೂರಿನ ಗಾಂಧಿವಾದಿ ಎನ್.ಕೆ.ಸಂಜೀವಯ್ಯ ಹಾಗೂ ಶಾಂತಮ್ಮ ದಂಪತಿಗಳ
ಮಗನಾಗಿ ಜನಿಸಿದ ಇವರು ಪ್ರಾಥಮಿಕ,
ಮಾಧ್ಯಮಿಕ
ಶಾಲೆಯನ್ನು ನಲ್ಲೂರು ಮತ್ತು ಆನೆಕೆರೆ ಸರ್ಕಾರಿ ಶಾಲೆಯಲ್ಲಿ ಮುಗಿಸಿದರು.
ನಂತರ ಚನ್ನರಾಯಪಟ್ಟಣದ ನವೋದಯ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದು
ಐತಿಹಾಸಿಕ ಶ್ರವಣಬೆಳಗೊಳದ ಶ್ರೀ ಗೊಮ್ಮಟೇಶ್ವರ ಮಹಾವಿದ್ಯಾಲಯದಲ್ಲಿ ಪದವಿ
ಪಡೆದರು. ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸ್ನಾತಕೋತ್ತರ
ಪದವಿ ಪಡೆದು ಸಾಹಿತ್ಯ ದಿಗ್ಗಜಗಳಾದ ದೇಜಗೌ,
ಹಾಮಾನಾ,
ಜೀಶಂಪ,
ಸಿಪಿಕೆ,
ಟಿವಿವಿ,
ರಾಗೌ,
ಡಿ.ಕೆ.ರಾಜೇಂದ್ರ,
ಪ್ರೊ.ಎಲ್.ಬಸವರಾಜು,
ಹಿ.ಶಿ.ರಾಮಚಂದ್ರೇಗೌಡ
ಅವರ ಗರಡಿಯಲ್ಲಿ ಪಳಗಿದವರು.
ನಂತರ ಬೆಂಗಳೂರಿನ
ವಿ.ವಿ.ಪುರಂ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ ವೃತ್ತಿ ಆರಂಭಿಸಿದರು. ಹಿರಿಯ
ಸಂಶೋಧಕ,
ಡಾ.ಹಂಪನಾ
ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ನಲ್ಲೂರ
ದೊರೆಕಾಳಿ’
ಪ್ರೌಢಪ್ರಬಂಧಕ್ಕೆ
ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ.ಪಡೆದಿದ್ದಾರೆ.
ತಂದೆಯ ಗಾಂಧಿವಾದದ
ನೆರಳಲ್ಲೇ ಬೆಳೆದ ಇವರು ಅತಿ ಶಿಸ್ತಿನಲ್ಲಿ ಹೆಜ್ಜೆ ಹಾಕುತ್ತಾ ಪಾಠ ಪ್ರವಚನದ
ಜೊತೆಗೆ ಬಯಲಾಟ,
ಕುಣಿದಾಟಗಳಲ್ಲಿ ಆಸಕ್ತಿ
ರೂಢಿಸಿಕೊಂಡರು. ಮೈಸೂರಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ತಮ್ಮಲ್ಲಡಗಿರುವ
ಸಾಹಿತ್ಯ ಪ್ರತಿಭೆಯನ್ನು ಮೊದಲ ಕವನ ಸಂಕಲನ ‘ದಗ್ಧ’ದಲ್ಲಿ
ಅನಾವರಣಗೊಳಿಸಿದರು.
‘ನಾನು
ಮೂಲತಃ ಕವಿ’
ಎನ್ನುವುದನ್ನು ನಾಲ್ಕೈದು
ವರ್ಷಗಳಲ್ಲಿ, ‘ಸೋನೆ
ಮುಗಿಲು’,
ರೆಕ್ಕೆ ಬಡಿಯುವ ಮುನ್ನ
ಮತ್ತು ‘ನಿವೃತ್ತೋಪನಿಷತ್ತು’
ಕವನ ಸಂಕಲನ
ಹೊರತರುವ ಮೂಲಕ ಸಾಬೀತುಪಡಿಸಿದರು.
ಜೊತೆಗೆ
‘ನೀನೆಂಬ ನಾನು’,
‘ಎಲ್ಲರಂಥವನಲ್ಲ’
ಎಂಬ ಕವನ
ಸಂಕಲನಗಳನ್ನೂ ಪ್ರಕಟಿಸಿದರು. ಕಾವ್ಯದ ಜೊತೆಗೆ ಬಣ್ಣ ಬಣ್ಣಗಳೊಂದಿಗೆ
ನರ್ತಿಸಲು ಸಜ್ಜಾದರು. ಅಭಿನಯ,
ಗಾಯನ,
ಸಮಾಜಸೇವೆಯನ್ನು
ಹವ್ಯಾಸವನ್ನಾಗಿಸಿಕೊಂಡ ನಲ್ಲೂರರು ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ
ಬಾಂಧವ್ಯ ಬೆಳೆಸಿಕೊಂಡರು. ಆಗ ನಡೆಯುತ್ತಿದ್ದ ಜಾನಪದ ಪ್ರವೇಶ ಮತ್ತು ಜಾನಪದ
ಪ್ರೌಢ ತರಗತಿಗಳಿಗೆ ಬೋಧಿಸುವ ಅವಕಾಶ ಪಡೆದ ಅವರು ತರಗತಿಯೊಳಗೆ ಬೋಧನೆ
ಮಾತ್ರವಲ್ಲ. ಹಾಡು,
ಕತೆ,
ಕುಣಿತ ಹೀಗೆ
ಜಾನಪದವನ್ನು ಅಪ್ಪಿಕೊಂಡರು.
‘ಜನಪದರು’
ತಂಡವನ್ನು ಕಟ್ಟಿ
ನಾಡಿನಾದ್ಯಂತ ಕುಣಿತ,
ನುಚ್ಚಾಯಿತು ನೀರ
ಹೊಳೆಯಾಗೆ ರೂಪಕಗಳು ಇವರ ನಿರ್ದೇಶನ ಮತ್ತು ಅಭಿನಯದೊಂದಿಗೆ ಪ್ರದರ್ಶನ ಕಂಡವು.
ಹೀಗೆ ಸಂಸ್ಕೃತಿ ಮತ್ತು ಸಂಘಟನೆಯ ಕ್ಷೇತ್ರದಲ್ಲಿ ಗುರುತರ ಹೆಜ್ಜೆಗಳನ್ನು
ನಲ್ಲೂರರು ಮೂಡಿಸಿದ್ದಾರೆ.
ಬೆಂಗಳೂರು
ವಿಶ್ವವಿದ್ಯಾಲಯದ ಶೈಕ್ಷಣಿಕ ಪರಿಷತ್ತಿನ ಸದಸ್ಯರಾಗಿ,
ಬೆಂಗಳೂರು
ದೂರದರ್ಶನ ಚಲನಚಿತ್ರ ಪರಿಶೀಲನಾ ಸಮಿತಿಯ ಸದಸ್ಯರಾಗಿ,
ಬೆಂಗಳೂರು
ವಿಶ್ವವಿದ್ಯಾಲಯ ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟದ ಪ್ರಧಾನ
ಕಾರ್ಯದರ್ಶಿಯಾಗಿ ಪ್ರಜ್ಞಾ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾಗಿ ಸೇವೆ
ಸಲ್ಲಿಸಿರುವ ಡಾ.ನಲ್ಲೂರು ಪ್ರಸಾದ್ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಭಾಷಾ
ಪಠ್ಯಗಳ ಸಂಪಾದಕರಲ್ಲಿ ಒಬ್ಬರಾಗಿ,
ಅಕಾಡೆಮಿ
ಪ್ರಕಟಿಸುತ್ತಿದ್ದ ಜಾನಪದ ಸಮಾಚಾರ,
ಅನಿಕೇತನ ಮತ್ತು
ಕನ್ನಡ ನುಡಿ ಪತ್ರಿಕೆಗಳ ಸಂಪಾದಕರಾಗಿ ತಮ್ಮ ಛಾಪು ಮೂಡಿಸಿದ್ದಾರೆ.
ತಮ್ಮ
ಕ್ರಿಯಾಶೀಲತೆ ಮತ್ತು ಚಿಂತನೆಗಳನ್ನು ಸಮಾಜಕ್ಕೆ ಧಾರೆ ಎರೆದ ಇವರನ್ನು ಅನೇಕ
ಸ್ಥಾನಗಳು ಹುಡುಕಿಕೊಂಡು ಬಂದವು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ
ಸದಸ್ಯತ್ವ,
ಕರ್ನಾಟಕ ಸಾಹಿತ್ಯ
ಅಕಾಡೆಮಿ ಸದಸ್ಯತ್ವ,
ಕನ್ನಡ ಸಾಹಿತ್ಯ
ಪರಿಷತ್ತಿನ ಗೌರವ ಕೋಶಾಧ್ಯಕ್ಷ ಸ್ಥಾನಗಳು ಕೂಡಾ ಸೇರಿವೆ.
ಹೀಗೆ ಹಳ್ಳಿಯಿಂದ ಬಂದು
ಬೆಂಗಳೂರಿನಂತಹ ನಗರದಲ್ಲಿ ನೆಲೆಸಿ ಅರವತ್ತರ ಹೊಸ್ತಿಲಲ್ಲಿರುವ ಉತ್ಸಾಹಿ,
ಸೃಜನಶೀಲ ಮತ್ತು
ಸಾಂಘಿಕ ಹೋರಾಟಗಾರರಾಗಿರುವ ಡಾ.ನಲ್ಲೂರು ಪ್ರಸಾದ್ ಈಗ ಕನ್ನಡ ಸಾಹಿತ್ಯ
ಪರಿಷತ್ತಿನ ಅಧ್ಯಕ್ಷರಾಗಿದ್ದಾರೆ.
ಬಹುಮುಖಿಯಾಗಿ ತಮ್ಮ
ಪ್ರತಿಭೆಯನ್ನು ಅಭಿವ್ಯಕ್ತಗೊಳಿಸಿರುವ ನಲ್ಲೂರರನ್ನು ಹಲವಾರು ಪ್ರಶಸ್ತಿಗಳು
ಅರಸಿಕೊಂಡು ಬಂದಿವೆ. ಜಾನಪದ ತಜ್ಞ ಪ್ರಶಸ್ತಿ,
ಜೀಶಂಪ ಜಾನಪದ
ಪ್ರಶಸ್ತಿ,
ಗೊಮ್ಮಟ ವಿದ್ಯಾಪೀಠ
ಪ್ರಶಸ್ತಿ,
ರಾಜ್ಯೋತ್ಸವ ಪ್ರಶಸ್ತಿ,
ಕನ್ನಡ ಬರಹಗಾರರು
ಮತ್ತು ಪ್ರಕಾಶಕರ ಸಂಘದ ವರ್ಷದ ಲೇಖಕ ಪ್ರಶಸ್ತಿ,
ಕನ್ನಡದ ಕುಲತಿಲಕ
ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಗೆಳೆಯರು,
ಶಿಷ್ಯರು
ಅಭಿಮಾನಿಗಳ ಹಿಂಡನ್ನು ಹೊಂದಿರುವ ನಲ್ಲೂರರು ಇಂದಿಗೂ ಅವರೆಲ್ಲರ ನೆಚ್ಚಿನ
ಮೇಷ್ಟ್ರು.
.