ಕನ್ನಡ ನಿಧಿ

ಕನ್ನಡ ನಾಡು ನುಡಿಯ ಸೇವೆಗೆ ಮುಡುಪಾಗಿರುವ ರಾಜ್ಯದ ಏಕೈಕ ಸಂಸ್ಥೆ ಎನಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ತೇರನ್ನು ಎಳೆಯುವ ಕ್ರಿಯಾಶೀಲ ಅಧ್ಯಕ್ಷರುಗಳಲ್ಲಿ ಡಾ.ನಲ್ಲೂರು ಪ್ರಸಾದ್ ಕೂಡಾ ಒಬ್ಬರಾಗಿದ್ದಾರೆ. ಅಧಿಕಾರ ವಹಿಸಿಕೊಂಡ ತಕ್ಷಣದಿಂದಲೇ ಪರಿಷತ್ತಿಗೆ ಜನಸಾಮಾನ್ಯರೂ ಎಡ ತಾಕುವಂತೆ ಮಾಡಬೇಕೆಂಬ ಹಂಬಲ ಹೊಂದಿದ್ದಾರೆ. ಅವರ ಈ ಉತ್ಕಟ ಬಯಕೆಗೆ ಪರಿಷತ್ತಿನ ಆರ್ಥಿಕ ಮುಗ್ಗಟ್ಟು ಅಡ್ಡಿ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಪರಿಷತ್ತಿನ ಕಾರ್ಯವ್ಯಾಪ್ತಿಯನ್ನು ರಾಜ್ಯದ ಮೂಲೆಮೂಲೆಗೂ, ಹಳ್ಳಿ ಹಳ್ಳಿಗೂ ವ್ಯಾಪಿಸುವಂತೆ ಮಾಡಲು ಹತ್ತು ಹಲವು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲು ಅಣಿಯಾಗುತ್ತಿದ್ದಾರೆ.

ಈ ನಿಟ್ಟಿನಲ್ಲಿ ಪರಿಷತ್ತಿಗೆ ಒಂದಿಷ್ಟು ಹಣಕಾಸು ಕ್ರೋಢೀಕರಿಸಬೇಕು, ಆ ಮೂಲಕ ಕನ್ನಡ ತಾಯಿಯ ಸೇವೆಯನ್ನು ವ್ಯಾಪಕಗೊಳಿಸಬೇಕೆಂಬ ಅಚಲ ವಿಶ್ವಾಸ ಹೊಂದಿರುವ ಹಾಲಿ ಅಧ್ಯಕ್ಷರು ಕನ್ನಡ ನಿಧಿ ಎಂಬ ವಿನೂತನ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಈ ನಿಧಿಗೆ ಹತ್ತು ರೂಪಾಯಿಯಿಂದ ಗರಿಷ್ಠ ಎಷ್ಟು ಬೇಕೆಂದರೂ ಉದಾರವಾಗಿ ದೇಣಿಗೆ ನೀಡಬಹುದು. ಈ ದೇಣಿಗೆ ತೆರಿಗೆ ವಿನಾಯಿತಿಯನ್ನೂ ಪಡೆದಿದೆ. ಈ ಹಣವನ್ನು ಬ್ಯಾಂಕಿನ ಖಾತೆಗೆ ಜಮಾ ಮಾಡಿ ಮೂಲಧನವನ್ನು ಯಾವುದೇ ಸಂದರ್ಭದಲ್ಲಿ ಬಳಸದಂತೆ ಹಾಗೂ ಆ ಹಣದಿಂದ ಬಡ್ಡಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಅದರಲ್ಲೂ ಜಿಲ್ಲಾ, ತಾಲೂಕು ಮತ್ತು ಹೋಬಳಿ ಮಟ್ಟದವರೆಗೂ ವಿಸ್ತರಿಸಲಾಗುತ್ತಿದೆ. ಕನ್ನಡ ನಿಧಿ ಯೋಜನೆ ಆರಂಭಗೊಂಡ ತಕ್ಷಣವೇ ಎಲ್ಲ ಕನ್ನಡಿಗರೂ ತಮ್ಮ ಉದಾರ ಹಸ್ತವನ್ನು ಚಾಚಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಶ್ರೀ ಟಿ.ಎ.ನಾರಾಯಣಗೌಡ ಕನ್ನಡ ನಿಧಿಗೆ ೫೦,೦೦೦ ರೂ. ನೀಡುವ ಮೂಲಕ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಅದೇ ರೀತಿ ಮಾಜಿ ಶಾಸಕಿ ಹಾಗೂ ಪ್ರಸಿದ್ಧ ವಕೀಲರಾದ ಶ್ರೀಮತಿ ಪ್ರಮೀಳಾ ನೇಸರ್ಗಿ ೧,೦೦,೦೦೧ ರೂ.ನೀಡುವ ಮೂಲಕ ಕನ್ನಡ ಕೈಂಕರ್ಯದಲ್ಲಿ ತಾವೂ ತೊಡಗಿಸಿಕೊಂಡಿದ್ದಾರೆ. ಅನೇಕ ಕನ್ನಡಿಗರು ಹಾಗೂ ಸಂಘ ಸಂಸ್ಥೆಗಳು ನಿಧಿಗೆ ತಮ್ಮ ಕಾಣಿಕೆ ನೀಡುತ್ತಿದ್ದಾರೆ.

ಕನ್ನಡ ನಿಧಿಗೆ ದೇಣಿಗೆ ನೀಡುವ ಆಸಕ್ತಿಯುಳ್ಳವರು ಬೆಂಗಳೂರಿನ ಸಿಂಡಿಕೇಟ್ ಬ್ಯಾಂಕ್ ಚಾಮರಾಜಪೇಟೆ ಶಾಖೆಯ ಖಾತೆ ಸಂಖ್ಯೆ ೨೦೧/೫೬೬೭೭ ಇಲ್ಲಿಗೆ ನೇರವಾಗಿ ಹಣವನ್ನು ಜಮಾ ಮಾಡಿ ಚಲನ್ ಪ್ರತಿಯನ್ನು ಪರಿಷತ್ತಿಗೆ ಕಳುಹಿಸಿದರೆ ಅಂತಹ ಉದಾರಿಗಳಿಗೆ (೧೦೦೦ ರೂ.ಗಿಂತ ಮೇಲ್ಪಟ್ಟ) ಕನ್ನಡ ಮಾನಧನರು ಎಂಬ ಅಭಿನಂದನಾ ಪತ್ರವನ್ನು ಪರಿಷತ್ತು ನೀಡಿ ಗೌರವಿಸಲಿದೆ. ಈ ನಿಧಿಗೆ ನೀಡುವ ಹಣಕ್ಕೆ ೮೦ ಜಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಇರುತ್ತದೆ.

website hosted by kar.nic.in
Designged and Maintained by kannadaratna.com