ಮನವಿ

ನ್ನಡ ಬಂಧುಗಳೆ,

ಡಾ.ನಲ್ಲೂರು ಪ್ರಸಾದ್, Dr. Nallur Prasadಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಇತಿಹಾಸ ಇವುಗಳ ರಕ್ಷಣೆ ಹಾಗೂ ಅಭಿವೃದ್ಧಿಯನ್ನೇ ಮುಖ್ಯ ಉದ್ದೇಶವಾಗಿಸಿಕೊಂಡು ೧೯೧೫ರಲ್ಲಿ ಸ್ಥಾಪನೆಗೊಂಡ ಕನ್ನಡ ಸಾಹಿತ್ಯ ಪರಿಷತ್ತು ವಿದ್ವಾಂಸರ, ನಾಡು-ನುಡಿ ಅಭಿಮಾನಿಗಳ ಮತ್ತು ಸರ್ಕಾರದ ಪ್ರೋತ್ಸಾಹದಿಂದ ನಾಡಿನ ಜನತೆಯಲ್ಲಿ ನವಚೈತನ್ಯವನ್ನೂ ಭಾಷಾಭಿಮಾನವನ್ನೂ ತುಂಬುತ್ತಾ ಬಂದಿದೆ. ಕನ್ನಡದ ಪ್ರಾತಿನಿಧಿಕ ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದ ಹೊಸದರಲ್ಲಿ ಕನ್ನಡ ನಾಡಿನ ಬೇರೆ ಬೇರೆ ಭಾಗಗಳಲ್ಲಿನ ಭಾಷಾಭಿಜ್ಞರಲ್ಲಿ ಐಕಮತ್ಯ-ಸೌಹಾರ್ದಗಳನ್ನೇರ್ಪಡಿಸುವುದು, ಬಹುರೂಪಿಯಾಗಿದ್ದ ಗ್ರಾಂಥಿಕ ಭಾಷೆಯನ್ನು ಒಂದೇ ರೂಪಕ್ಕೆ ತರುವ ಮಾರ್ಗಗಳನ್ನು ನಿರ್ಧರಿಸುವುದು, ಕನ್ನಡವನ್ನೋದುವ ವಿದ್ಯಾರ್ಥಿಗಳಿಗೆ ಎಲ್ಲ ಶಾಲೆಗಳಲ್ಲಿ ಪಾಠದ ಪುಸ್ತಕಗಳು ಒಂದೇ ಆಗಿರುವಂತೆ ಮಾಡುವುದು, ಕನ್ನಡಿಗರಲ್ಲಿ ಲೋಕ ವ್ಯವಹಾರಜ್ಞಾನ ಸುಲಭವಾಗಿ ಹರಡಲು ಸಹಾಯಕವಾಗುವ ಪುಸ್ತಕಗಳನ್ನು ಬರೆಯಿಸಿ ಪ್ರಚಾರ ಮಾಡುವುದು, ಕನ್ನಡದಲ್ಲಿ ಬರೆಯುವ ನಾನಾ ಶಾಸ್ತ್ರಾದಿ ವಿಷಯಗಳಲ್ಲಿ ಪ್ರಯೋಗಿಸಲು ಅನುಕೂಲವಾಗುವ ಪಾರಿಭಾಷಿಕ ಶಬ್ದಗಳನ್ನು ನಿರ್ಣಯಿಸುವುದು-ಇವುಗಳನ್ನು ತನ್ನ ಪ್ರಮುಖ ಉದ್ದೇಶಗಳಾಗಿ ಹೊಂದಿತ್ತು. ಕ್ರಮೇಣ ಪರಿಷತ್ತು ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತ ಪ್ರತಿವಾರ ಯಾವುದಾದರೊಂದು ಸಾರ್ವಜನಿಕ ಕಾರ್ಯಕ್ರಮ, ಭಾಷಣ, ಕಾವ್ಯವಾಚನ ನಡೆಸುವುದು, ಕನ್ನಡಕ್ಕಾಗಿ ದುಡಿಯುವ ಸಂಘಸಂಸ್ಥೆಗಳ ಸಮಾವೇಶ ಏರ್ಪಡಿಸುವುದು, ಗಮಕ ಕಲಾಭ್ಯಾಸ, ಜಾನಪದ, ಶಾಸನ ತರಗತಿಗಳನ್ನು ನಡೆಸುವುದು, ವಿಚಾರ ಸಂಕಿರಣ, ಉಪನ್ಯಾಸ ಮಾಲಿಕೆಗಳನ್ನೇರ್ಪಡಿಸುವುದು, ಗ್ರಂಥ ಪ್ರದರ್ಶನ, ಸಾಹಿತ್ಯ ವಾಹಿನಿಯನ್ನು ಗ್ರಾಮಾಂತರ ಪ್ರದೇಶದಲ್ಲಿ ಪ್ರಸಾರ ಮಾಡುವುದು, ಸಂಚಾರೋಪನ್ಯಾಸ ಯೋಜನೆ, ವಸಂತ ಸಾಹಿತ್ಯೋತ್ಸವ, ಪರಿಷತ್ತಿನ ಕಾರ್ಯಕ್ರಮ ಯೋಜನೆಗಳನ್ನು ಪರಿಚಯಿಸುವ ಕನ್ನಡ ನುಡಿ ಹಾಗೂ ಕನ್ನಡಿಗರಿಗೆ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಚರ್ಚೆಗೊಳಪಡಿಸುವ, ಸಂಶೋಧನೆಗೆ ಒತ್ತುಕೊಡುವ ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆಯ ಪ್ರಕಟಣೆ, ಸರ್ಕಾರದ ಸಹಾಯಧನದಿಂದ ಮೌಲಿಕವಾದ ಕೃತಿಗಳ ಪ್ರಕಟಣೆ ಮತ್ತು ಮಾರಾಟ ಮುಂತಾದವುಗಳ ಮೂಲಕ ಸಹಸ್ರಮುಖಗಳತ್ತ ಚಾಚಿಕೊಂಡಿತು.

ಈವರೆಗೆ ಆಗಿಹೋದ ೨೨ ಅಧ್ಯಕ್ಷರ ಆಡಳಿತಾವಧಿಯಲ್ಲೂ ಹೊಸ ಹೊಸ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಲೇ ಇರುವುದರಿಂದಾಗಿ ಕನ್ನಡ ಸಾಹಿತ್ಯ ಸರಸ್ವತಿ ಹಳ್ಳಿಗಳಿಗೆ ಧಾವಿಸಿದ್ದಾಳೆ. ಕನ್ನಡಕ್ಕೊಂದು ಅದ್ಭುತ ನಿಘಂಟು ನಿರ್ಮಾಣವಾಗಿದೆ. ಯೋಜನಾಬದ್ಧ ಕಾರ್ಯಕ್ರಮಗಳು ನಡೆಯುತ್ತಿವೆ. ಅತ್ಯುತ್ತಮ ಪ್ರಕಟಣೆಗಳ ಸುಗ್ಗಿಕಾಲ ಕಂಡುಬಂದಿದೆ. ಅಚ್ಚುಕಟ್ಟಾಗಿ ಕಛೇರಿ ವ್ಯವಹಾರ ನಡೆಸಲು ಸಾಧ್ಯವಾಗಿದೆ. ಆಧುನಿಕ ತಂತ್ರಜ್ಞಾನ ಪರಿಷತ್ತಿಗೆ ಪ್ರವೇಶಿಸಿದೆ. ಇತ್ತೀಚಿನ ದಿವಸಗಳಲ್ಲಿ ಸಾಹಿತ್ಯ ಪರಿಷತ್ತು ಕನ್ನಡಪರ ಹೋರಾಟದ ವೇದಿಕೆಯಾಗಿ ಸಜ್ಜುಗೊಂಡು ಕನ್ನಡದ ಏಳಿಗೆ - ಸಮಸ್ಯೆ ಏನೇ ಇರಲಿ ಜನ ಕನ್ನಡ ಸಾಹಿತ್ಯ ಪರಿಷತ್ತಿನತ್ತ ನೋಡುವಂತಾಗಿದೆ.

ಇಂಥ ಏಕಮೇವ ಸಾಹಿತ್ಯಿಕ ಸಾರ್ವಭೌಮ ಸಂಸ್ಥೆಗೆ ಪ್ರತಿಯೊಬ್ಬ ಕನ್ನಡಿಗರೂ ಸದಸ್ಯರಾಗಬೇಕು ಎಂಬುದು ನಮ್ಮ ಆಶಯ. ಇಂದೇ ಕನ್ನಡ ಸಾಹಿತ್ಯ ಪರಿಷತ್ತಿಗೆ ಬನ್ನಿ ಸದಸ್ಯರಾಗಿ, 95 ವರ್ಷಗಳ ಸುದೀರ್ಘ ಇತಿಹಾಸವಿರುವ ನಾಡಿನ ಸಾಹಿತ್ಯಲೋಕದ ಪ್ರಾತಿನಿಧಿಕ ಸಂಸ್ಥೆಯ ಸದಸ್ಯರು ನೀವೆಂಬ ಅಭಿಮಾನಕ್ಕೆ ಪಾತ್ರರಾಗಿ.

ಇಂತಿ
ಡಾ. ನಲ್ಲೂರು ಪ್ರಸಾದ್
ಅಧ್ಯಕ್ಷರು

ಮುಖಪುಟ

website hosted by kar.nic.in
Designged and Maintained by kannadaratna.com